ಎಂಎಲ್ಸಿ ಸೂರಜ್ ಹೇಳಿಕೆಗೆ ಎಂಪಿ ಶ್ರೇಯಸ್ ತಿರುಗೇಟು

 ಹಾಸನ: ತಮ್ಮ ವಿರುದ್ಧ ಜೆಡಿಎಸ್ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಮಾಡಿದ್ದ ಆರೋಪ, ವಾಗ್ದಾಳಿಗೆ ತಿರುಗೇಟು ನೀಡಿದ ಸಂಸದ ಶ್ರೇಯಸ್ ಪಟೇಲ್, 

ಇದು ಬಾಲಿಷ ಹೇಳಿಕೆ. ಅವರ ವ್ಯಕ್ತಿತ್ವ, ನಡತೆಯನ್ನು ತೋರಿಸುವ ಹೇಳಿಕೆ ಎಂದು ಪ್ರತಿಕ್ರಿಯಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು-ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರು, ವಾಗ್ಮಿ, ಅನುಭವಿಗಳು 

ಮೇಧಾವಿಗಳು ಮಾತಾಡುವಂತೆ ಮಾತಾಡಿದ್ದಾರೆ, ಆದರೆ ವಾಸ್ತವವಾಗಿ ಏನು ಅಂತ ಎಲ್ಲರಿಗೂ ಗೊತ್ತು ಎಂದು ಲೇವಡಿ ಮಾಡಿದರು.

ಅವರು ಒಮ್ಮೆಯಷ್ಟೇ ಪರಿಷತ್ ಸದಸ್ಯರಾಗಿದ್ದಾರೆ. ನಾನು ಜಿಪಂ ಸದಸ್ಯನಾಗಿ, ರಾಜಕೀಯವಾಗಿ ಬೆಳೆದು ಸಂಸದ ಆಗಿದ್ದೀನಿ. ಏಕಾಏಕಿ ಕುಟುಂಬದ 

ಹೆಸರಿನಲ್ಲಿ ಜನಪ್ರತಿನಿಧಿ ಆಗಿರೋದು, ಉದ್ಭವ ರೀತಿಯಲ್ಲಿ ಎದ್ದು ಬಂದಿರೋದು ಅವರು ಎಂದು ತಿರುಗೇಟು ನೀಡಿದರು.

ಅವರು ಗೆದ್ದ ಮೇಲೆ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಗ್ರಾಪಂಗೆ ಹೋಗಿ ಸಭೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಶ್ರೇಯಸ್, ಅವರ 

ಆ ಹೇಳಿಕೆ ನನಗೆ ವೈಯಕ್ತಿಕವಾಗಿ ನೋವಾಗಿದೆ ಎಂದರು.

ರಾಜಕೀಯವಾಗಿ ಅವರು, ನಾನು ಎದುರಾಳಿಯೆ. ಆದರೆ ಯಾವುದೇ ವಿಚಾರದಲ್ಲಿ ನಾನು ಬಗ್ಗೋನಲ್ಲ. ಆದರೆ ನಮ್ಮ ತಾತನ ಹೆಸರು ಹೇಳಿ ಮಾತಾಡಿದ್ದು 

ಬೇಜಾರಾಗಿದೆ. ನಾನು ಕೇವಲ ತಾತನ ಹೆಸರು ಹೇಳಿಕೊಂಡು ಬಂದಿಲ್ಲ. ಹೋರಾಟ ಮಾಡಿ ಕಷ್ಟದಿಂದ ಮೇಲೆ ಬಂದವನು ಎಂದು ಟಾಂಗ್ ನೀಡಿದರು.

ಇದ್ದವರ ಬಗ್ಗೆ ಮಾತಾಡಲಿ, ನಾನೇನಾದ್ರೂ ದೇವೇಗೌಡರ ಬಗ್ಗೆ ಎಂದಾದರೂ ಮಾತನಾಡಿದ್ದೇನಾ, ಇವತ್ತೂ ಕೂಡ ಹಿರಿಯರ ಮೇಲೆ ತುಂಬಾ ಗೌರವ ಇದೆ,

ದೇವೇಗೌಡರು, ಪುಟ್ಟಸ್ಚಾಮಿಗೌಡರು, ಶ್ರೀಕಂಠಯ್ಯ ಅವರು, ನಂಜೇಗೌಡರ ಬಗ್ಗೆ ಮಾತಾಡಲು ನಮಗೆ ಅರ್ಹತೆ, ಯೋಗ್ಯತೆ ಇಲ್ಲ ಎಂದರು.

ಇವರು ಏಕಾಏಕಿ ನಮ್ಮ ತಾತನ ಹೆಸರು ತೆಗೆದುಕೊಂಡಿದ್ದಾರೆ, ಯಾವುದೇ ಪುರಾವೆ ಇಲ್ಲದೆ ಮಾತಾಡಿದ್ದಾರೆ. ೨೫ ವರ್ಷದ ಹಿಂದೆ ಆಸಿಡ್ ದಾಳಿ ನಡೆದಾಗ 

ಇವರ ವಯಸ್ಸು ಎಷ್ಟಿತ್ತು ಯೋಚಿಸಲಿ, ಮಾಹಿತಿ ಇದೆಯಾ, ಅವರ ಹೇಳಿಕೆ ಶುದ್ಧ ಸುಳ್ಳು ಎಂದು ಜರಿದರು.

ಈ ಬಗ್ಗೆ ಅವರ ತಂದೆ ರೇವಣ್ಣ ಯಾಕೆ ಮಾತಾಡಿಲ್ಲ ಎಂದ ಸಂಸದರು, ಅವರ ಅಜ್ಜಿ ನಮಗೂ ಅಜ್ಜಿ ಸಮಾನರು, ನಮ್ಮ ಅಜ್ಜಿ ಅವರು ಒಟ್ಟಿಗೇ ಇದ್ದವರು. 

ಅವರು ಅಥವಾ ಅವರ ಕುಟುಂಬದ ಇತರರು ಯಾಕೆ ಈ ಬಗ್ಗೆ ಮಾತಾಡಿಲ್ಲ ಎಂದು ಕೇಳಿದರು.

ಮೈಕ್ ಸಿಕ್ಕಿದೆ, ಜನ ಶಿಳ್ಳೆ ಹೊಡೀತಾರೆ ಅಂಥ ಮಾತನಾಡಿದ್ದಾರಾ, ಪೆನ್‌ಡ್ರೈವ್ ವಿಚಾರ ನಾನು ಮಾತನಾಡಲ್ಲ. ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿದೆ, 

ಅನೇಕರು ಬಲಿಪಶು ಆಗಿದ್ದಾರೆ, ಅದಕ್ಕೆ ಕಾರಣ ಯಾರು, ಪೆನ್‌ಡ್ರೈವ್ ಒಳಗಿದ್ದ ವಿಡಿಯೋ ಮಾಡಿದ್ದು ಯಾರು, ಮೊದಲು ಅದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ 

ಎಂದು ಮಾತಿನ ಚಾಟಿ ಬೀಸಿದರು.

ತಾತನ ಹೆಸರಿನಿಂದ ಅವರು ಗೆದ್ದಿರೋದು, ಹೋಗಲಿ ಎಂಎಲ್‌ಸಿಯಾಗಿ ಅವರ ಸಾಧನೆ ಏನು ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಿ, ದೇವೇಗೌಡರು, 

ರೇವಣ್ಣ ಅವರದು ಬಿಡಿ, ಇವರ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.


ಹತಾಶೆ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಾಗ ಈ ರೀತಿಯ ಮಾತು ಬರುತ್ತೆ ಎಂದು ಕುಟುಕಿದ ಶ್ರೇಯಸ್,

ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚಿಸುತ್ತಾರೆ, ಎಲ್ಲೇ ಹೋದರೂ ಕಿತಾಪತಿ ಮಾಡಿ ಬರ್ತಾರೆ, ಯಾವ ಊರಿಗೆ 

ಹೋದರೂ ಕಿತಾಪತಿ ಮಾಡಿ ಬರೋದು ಅವರ ಕೆಲಸ ಎಂದು ದೂರಿದರು.

ನಾನು ಅವರ ಕಾರ್ಯಕರ್ತರ ಮೇಲೆ ಕೇಸ್ ಹಾಕ್ಸಿದ್ರೆ ದಾಖಲೆ ಕೊಡಲಿ, ನಮ್ಮ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ 

ಮಾಡುತ್ತಿದ್ದಾರೆ, ಅವರ ಕುಟುಂಬದವರ ಮೇಲೆಲ್ಲಾ ಕೇಸ್ ಆಗಿದೆ, ಅವರ ಕಾರ್ಯಕರ್ತರ ಮೇಲೆ ಕೇಸ್ ಏಕೆ ಹಾಕ್ತಾರೆ, ಅಸೂಯೆಯಿಂದ ಈ ರೀತಿ 

ಮಾತನಾಡಿದ್ದಾರೆ, ದೇವೇಗೌಡರ ಕುಟುಂಬದಿಂದ ಬಂದವರು, ಆ ಘನತೆ ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು 

ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ, ಈಗಾಗಲೇ ಜನ ಬುದ್ಧಿ ಕಲಿಸಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತೆ ಮಂಗಳಾರತಿ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

೨೦೨೮ರ ಚುನಾವಣೆಯಲ್ಲಿ ಯಾರು, ಯಾರು ಏನಾಗುತ್ತಾರೆ ಗೊತಾಗುತ್ತೆ, ಜನ ಇವರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಆದರೆ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ಕೊಡಲಿ ಇಲ್ಲದಿದ್ದರೆ ಸುಮ್ಮನಿರಲಿ ಎಂದು ಟಾಂಗ್ ನೀಡಿದರು.

ಸಾರಿಗೆ ಬಸ್ ದರ ಏರಿಕೆ ಕುರಿತು ಮಾತನಾಡಿದ ಶ್ರೇಯಸ್, ಇಂಧನ ದರ ಜಾಸ್ತಿ ಆಗಿದೆ,೭ನೇ ವೇತನ ಆಯೋಗ ಜಾರಿ ಆಗುತ್ತಿದೆ. ಸಾರಿಗೆ ಇಲಾಖೆ ನೌಕರರು 

ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟಿದ್ದೇವೆ. ಬೆಲೆ ಏರಿಕೆ ಸರ್ವೆ ಸಾಮಾನ್ಯ ಎಂದರು.

ಜೀವನ ನಿರ್ವಹಣಾ ವೆಚ್ಚ ಜಾಸ್ತಿ ಆಗುತ್ತಿದೆ. ಹಾಲು, ಬಸ್ ದರ ಏರಿಕೆ ನಾವಷ್ಟೇ ಮಾಡಿಲ್ಲ, ಎಲ್ಲ ಸರ್ಕಾರಗಳು ಮಾಡಿವೆ, ರಾಜ್ಯದ ಜನ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ.

ಸಿದ್ದರಾಮಯ್ಯ, ಡಿ.ಶಿ.ಶಿವಕುಮಾರ್ ಅವರು ಶಾಶ್ವತ ಗ್ಯಾರಂಟಿ ನೀಡಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನುಡಿದರು.

Post a Comment

Previous Post Next Post