ಹಾಸನ: ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಆಲೂಗಡ್ಡೆ ಬೆಳೆಯುತ್ತಿದ್ದರು, ಆದರೆ ಈಗ ಕೇವಲ 4 ಸಾವಿರ ಹೆಕ್ಟೇರ್ ಗೆ ಬಂದು ನಿಂತಿದೆ. ರೈತರು ಬೆಳೆ ಬೆಳೆಯುವ ವಿಧಾನ ಕಲಿಯಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯ ತೋಟಗಾರಿಕೆ ಇಲಾಖೆ 263 ಹುದ್ದೆಗಳಲ್ಲಿ ಕೇವಲ 134 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಇಲಾಖೆಯಲ್ಲಿ ಕೆಲಸ ಮಾಡುವವರ ಕೊರತೆ ಇದೆ. ಆಲೂಗಡ್ಡೆ ಬೆಳೆ ವಿಫಲವಾದ ಹಿನ್ನಲೆ ರೈತರು ಜೋಳ ಬೆಳೆಯಲು ಪ್ರಾರಂಭಿಸಿದರು ಎಂದರು.
ಜಿಲ್ಲೆಯ ಬೆಳೆ ಪರಿಶೀಲನೆಗೆ ವಿಜ್ಞಾನಿಗಳ ತಂಡ ಬಂದಿತ್ತು. ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್ ನಲ್ಲಿ ಜೋಳ ಬೆಳೆಯುತ್ತಿದ್ದರು. ಈ ಬೆಳೆ ಕೂಡ ಈಗ 40 ಸಾವಿರ ಹೆಕ್ಟೇರ್ ಗೆ ಬಂದಿದೆ. ಒಂದೇ ಬೆಳೆ ಬೆಳೆಯುವುದರಿಂದ ಮತ್ತು ಔಷಧಿ ಸಿಂಪಡಣೆ ಮಾಡುವುದರಿಂದ ಸುಮಾರು ಹತ್ತು ವರ್ಷ ಆ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯಲು ಆಗೊಲ್ಲ. ಆಲೂಗಡ್ಡೆ, ಜೋಳದ ಬೆಳೆ ಅವನತಿ ಅಂಚಿಗೆ ಬಂದಿವೆ. ಇದನ್ನು ಪರಿಶೀಲನೆಗೆ ರಾಜ್ಯ ಸರ್ಕಾರ ಒಂದು ತಜ್ಞರ ನಿಯೋಗ ಕಳಿಸಬೇಕು. ಹೀಗಾಗಿ ಈ ಪರಿಸ್ಥಿತಿ ಬಗ್ಗೆ ಸಮಗ್ರ ಅವಲೋಕನ ಆಗಬೇಕು ಎಂದು ಆಗ್ರಹಿಸಿದರು.
ಕೃಷಿ ಇಲಾಖೆಯಲ್ಲಿ 483 ಹುದ್ದೆಗಳಲ್ಲಿ 350 ಪೋಸ್ಟ್ ಖಾಲಿ ಇದೆ. ಈ ರೀತಿ ಆದರೆ ಹೇಗೆ ಕಾರ್ಯ ನಿರ್ವಹಿಸಲು ಆಗುತ್ತದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಬೆಳೆ ಕಳೆದುಕೊಂಡ ಸಣ್ಣ ಹಿಡುವಳಿದಾರರಿಗೆ ಪರಿಹಾರ ಒದಗಿಸಬೇಕು . ರೈತರಿಗೆ ಯಾವ ಬೆಳೆ ಮಾಡಬೇಕು ಎಂಬ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.


Post a Comment