ಹಿರೀಸಾವೆ: ಹೋಬಳಿಯ ಉಳ್ಳಾವಳ್ಳಿ ಗ್ರಾಮದೇವತೆ ಶ್ರೀ ಹುಚ್ಚಮ್ಮ ದೇವಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು. ವಿಯ ಸನ್ನಿಧಿ ಸೇರಿದಂತೆ ಎಲ್ಲ ದೇಗುಲಗಳಿಗೆ ಹಸಿರು ಚಪ್ಪರ ಹಾಕಿ ಬಾಳೆ ಕಂದು ಕಟ್ಟಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.
ಹಿಂದಿನ ದಿನ ಸಮೀಪದ ಮಲ್ಲಘಟ್ಟ ಕೆರೆಗೆ ದೇವಿಯ ವಿಗ್ರಹವನ್ನು ಕರೆದೊಯ್ದು ಗಂಗಾಸ್ನಾನ ಮುಗಿಸಿ ಊರಿಗೆ ಕರೆತರಲಾಯಿತು. ಗ್ರಾಮಸ್ಥರು ದೇವಿಯನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ಸಂಜೆ ಕೆರೆ ಬಳಿ ಕಳಸ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಳಸೋತ್ಸವಕ್ಕೆ ಚಾಲನೆ ದೊರೆಯಿತು. ಮಂಗಳವಾದ್ಯದೊಂದಿಗೆ ಶ್ರೀ ಹುಚ್ಚಮ್ಮ ದೇವಿಯ ಅಡ್ಡ ಪಲ್ಲಕ್ಕಿ ಹಾಗೂ ಕಳಸೋತ್ಸವ ಸಾಗಿದಂತೆಲ್ಲ ಭಕ್ತರು ಈಡುಗಾಯಿ ಒಡೆದರು. ಹೆಣ್ಣು ಮಕ್ಕಳು ಬಾಯಿ ಬೀಗ ಚುಚ್ಚಿಸಿಕೊಂಡು ತಂಬಿಟ್ಟಿನ ಆರತಿ ಹಿಡಿದು ದೇವಿಯೊಂದಿಗೆ ಹೆಜ್ಜೆ ಹಾಕಿದರು.
ಕಂಕಣ ಕಟ್ಟಿಸಿಕೊಂಡಿದ್ದ ಹೆಣ್ಣು ಮಕ್ಕಳು ಕಳಸ ಹೊತ್ತು ಸಾಗಿದರು. ಹಿರಿಯ ತಾಯಂದಿರು ದೇವಿಯ ಮೇಲಿನ ಸೋಬಾನೆ ಪದ ಹಾಡಿದರೆ, ಕೆಂಚರಾಯ ಹಾಗೂ ಭೂತರಾಯ ಸೋಮಗಳ ಕುಣಿತ ನೋಡುಗರ ಗಮನ ಸೆಳೆಯಿತು.
ದೇವಿಯನ್ನು ಸನ್ನಿಧಿಗೆ ಕರೆತರಲಾಯಿತು. ಕಳಸ ಹಾಗೂ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಹೆಣ್ಣು ಮಕ್ಕಳು ದೇವಿಗೆ ತಂಬಿಟ್ಟಿನ ಆರತಿ ಬೆಳಗಿದರು. ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.


Post a Comment