ಚುನಾವಣೆ ವೇಳೆ ಗ್ಯಾರಂಟಿ ಹಣ ಸಿಗುತ್ತೆ: ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಟೀಕೆ

 ಹಾಸನ: ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿ ಹಣವನ್ನು ಕೊಡುವ ಕಾಂಗ್ರೆಸ್ ಸರ್ಕಾರಕ್ಕೆ ಉಳಿದ ಸಮಯದಲ್ಲಿ ಜನರ ನೆನಪು ಬರುವುದಿಲ್ಲ ಎಂದು ಜೆಡಿಎಸ್ ಪಕ್ಷದ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.


ನಗರದ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರು, ಹಾಲಿ, ಮಾಜಿ ಶಾಸಕರು, ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ ಸಮಯದಲ್ಲಿ ಗೃಹಲಕ್ಷ್ಮೀ ಹಣ ಕೊಡಲಾಗಿತ್ತು. ಆನಂತರ ನಿಲ್ಲಿಸಿದರು. ಮುಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಆದರೆ ಮಾತ್ರ ಗೃಹ ಲಕ್ಷ್ಮೀ ಹಣ ಹಾಕುತ್ತಾರೆ. ಇವರಿಗೆ ಚುನಾವಣೆ ವೇಳೆ ಮಾತ್ರ ಗ್ಯಾರಂಟಿ ನೆನಪಿಗೆ ಬರುತ್ತದೆ ಎಂದು ವ್ಯಂಗ್ಯವಾಡಿದರು.



ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಕುರಿತು ನಾವು ಸಭೆ ಮಾಡಿದ್ದೇವೆ. ಈಗಾಗಲೇ ಪಕ್ಷದ ಸದಸ್ಯತ್ವ ನೋಂದಣಿ ವೇಗವಾಗಿ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ. ಈ ಸ್ಥಳೀಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹತ್ತು ದಿನದಲ್ಲೇ ಕುಮಾರಣ್ಣ, ಜೆಡಿಎಸ್ ಶಾಸಕರು, ಎಂಎಲ್‌ಸಿ, ಮುಖಂಡರ ಸಭೆ ಮಾಡಲಿದ್ದಾರೆ ಎಂದರು.

ಬಿಜೆಪಿ – ಜೆಡಿಎಸ್ ಮೈತ್ರಿ ಬಹಳ ಭದ್ರವಾಗಿದೆ, ಕೇಂದ್ರ ನಾಯಕರು ದೇವೇಗೌಡರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಂತರ ಕೇಂದ್ರ ಸಚಿವರಾಗಿ ಎರಡು ಖಾತೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೆಲಸ ಮಾಡಿದಂತೆ ಮುಂದೆ ನಡೆಯುವ ಎಲ್ಲಾ ಚುನಾವಣೆಯಲ್ಲೂ ಕೂಡ ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಿನಿಂದ ಎದುರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇದೆ ವೇಳೆ ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಿ ಶಾರದಾ ಪೂರ್ವ ನಾಯಕ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಶಾಸಕರಾದ ಎ. ಮಂಜು, ಸಿ.ಎನ್. ಬಾಲಕೃಷ್ಣ, ಎಚ್.ಪಿ. ಸ್ವರೂಪ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಮುಖಂಡರಾದ ಶೃಗೇಂರಿ ಸುಧಾಕರ್ ಶೆಟ್ರು, ಶಿವಮೊಗ್ಗ ಮಾಜಿ ಶಾಸಕರಾದ ಪ್ರಸನ್ನ , ಭದ್ರಾವತಿಯ ಶಾರದ ಅಪ್ಪಾಜಿಗೌಡ , ಅರಸೀಕೆರೆ ಸಂತೋಷ್, ಬಾಣಾವರ ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

Previous Post Next Post