ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಅವಘಡಗಳಿಗೆ ಕೇಂದ್ರ ಸರ್ಕಾರವೇ ಹೊಣೆ

ಸಕಲೇಶಪುರ : ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕೇ ಹೊರತು ರಾಜ್ಯ ಸರ್ಕಾರದ ಮೇಲೆ ಹೇರುವುದು ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.

ಗುರುವಾರ ರಾಷ್ಟ್ರೀಯ ಹೆದ್ದಾರಿ-75ರ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇರವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಮಗಾರಿ ಗುತ್ತಿಗೆ ನೀಡುವುದರಿಂದ ಹಿಡಿದು ಮೇಲ್ವಿಚಾರಣೆಯನ್ನು ಕೇಂದ್ರ ಸರ್ಕಾರವೇ ನಡೆಸುತ್ತಿದೆ. ಆದ್ದರಿಂದ, ಇಲ್ಲಿನ ಎಲ್ಲ ಅವಘಡಗಳಿಗೂ ಕೇಂದ್ರವೆ ಹೊಣೆ. ಎಂದರು.

ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ಹಾಗೂ ವೇಗವಾಗಿ ಮಾಡುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬಹುದೇ ಹೊರತು ಮತ್ತ್ಯಾವ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಹೆದ್ದಾರಿ ಪರಿಶೀಲಿಸಿದ ವೇಳೆ ಕಳಪೆ ಬಗ್ಗೆ ಮಾತನಾಡಿದ್ದೆ. ಅಲ್ಲೇ ಶೀಘ್ರವೇ ಕಾಮಗಾರಿ ನಡೆಸುವ ಮೂಲಕ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಿದ್ದೆ. ಈ ವೇಳೆ ಒಂದು ವರ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ, ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನು ಮೂರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಗುತ್ತಿಗೆದಾರರು ನೀಡುತ್ತಿದ್ದಾರೆ. ಆದರೆ, ಇನ್ನೂ ಆರು ತಿಂಗಳಾದರೂ ಕಾಮಗಾರಿ ಮುಗಿಯುವುದು ಅನುಮಾನ. ಭೂಕುಸಿತಕ್ಕೆ ನೇರವಾಗಿ ಗುಡ್ಡಗಳನ್ನು ಕತ್ತರಿಸಿರುವುದೆ ಕಾರಣ ಎಂದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ, ವಿರೋಧ ಪಕ್ಷದ ನಾಯಕರಿಗೆ ಕೆಲಸವಿಲ್ಲ. ಅನವಶ್ಯಕವಾಗಿ ರಾಜ್ಯ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳನ್ನು ಟೀಕಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಗೆ ಕೇಂದ್ರಕ್ಕೆ ದೂರು ನೀಡಬೇಕೇ ಹೊರತು ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ತಪ್ಪು. ಅನವಶ್ಯಕವಾಗಿ ರಾಜ್ಯದ ಜನರ ದಿಕ್ಕುತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಸುರೇಶ್, ಜಿಲ್ಲಾಧಿಕಾರಿ ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ, ಉಪವಿಭಾಗಾಧಿಕಾರಿ ಶ್ರುತಿ, ತಹಸೀಲ್ದಾರ್ ಅರವಿಂದ್, ಕಾಂಗ್ರೆಸ್ ಮುಖಂಡ ಮುರಳಿಮೋಹನ್ ಸೇರಿದಂತೆ ಹಲವರು ಇದ್ದರು.

ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ: ಮಂಗಳೂರು ಆಹಿತಕರ ಘಟನೆಯಲ್ಲಿ ಭಾಗಿಯಾದವರ ಬಂದನಕ್ಕೆ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳು ಪರಮಾಧಿಕಾರ ಹೊಂದಿದ್ದಾರೆ. ಜಲಾನಯನ ಇಲಾಖೆಯ ಇಂಜಿನಿಯರ್‌ಗಳ ವರ್ಗಾವಣೆ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ತಿಳಿದಿಲ್ಲ. ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಕೇಂದ್ರ ನಾಯಕರಿಗೆ ಬಿಟ್ಟದ್ದು ಎಂದರು.

Post a Comment

Previous Post Next Post