ಕರ್ತವ್ಯ ಬಹಿಷ್ಕರಿಸಿ ಕರ್ನಾಟಕ ಬ್ಯಾಂಕ್ ನೌಕರರು ಪ್ರತಿಭಟನೆ

ಹಾಸನ: ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಕಾಯಿದೆ ಇದ್ದರೂ, ಮಲತಾಯಿ ಧೋರಣೆಯಿಂದ ನಮಗೆ ಕೊಡುವ ಸೌಲಭ್ಯ ಕೊಡುತ್ತಿಲ್ಲ. ಕೂಡಲೇ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಕೆ.ಆರ್.ಪುರಂ ಬಳಿ ಇರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಬ್ಯಾಂಕ್ ಮುಂದೆ ಪ್ರತಿಭಟಿಸಿದರು. 


ಈ ವೇಳೆ ಮಾತನಾಡಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಪ್ರಭು, ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಅಧಿಕಾರಿಗಳ ಸಂಘ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಕ್ರಿಯಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಾವೇರಿ ಗ್ರಾಮೀಣ ಬ್ಯಾಂಕ್ ಸ್ಥಾಪನೆಯಾದ ದಿನದಿಂದಲೂ ನಮ್ಮ ಬೇಡಿಕೆ ಈಡೇರಿಕೆ ಹೋರಾಟ ಮಾಡುತ್ತಿದ್ದರೂ, ಬೇಡಿಕೆ ಈಡೇರಿಲ್ಲ. ೨೦ ವರ್ಷಗಳ ಹಿಂದೆಯೇ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಕಾಯಿದೆ ಬಂದಿದ್ದರೂ, ಅದರಂತೆ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.

ಹೀಗಾಗಿ ಸರ್ಕಾರ ಮತ್ತು ಆಡಳಿತ ಮಂಡಳಿ ವಿರುದ್ಧ ಹೋರಾಟ ನಿರಂತರವಾಗಿದೆ. ೪೦ ದಶಕಗಳ ನಂತರ ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಲು ಜಂಟಿ ಕ್ರಿಯಾ ಸಮಿತಿ ಆದೇಶ ಕೊಟ್ಟರೂ, ಲಾಭ ಸಿಗುತ್ತಿಲ್ಲ. ನಾವು ನೂರಕ್ಕೆ ೯೦ ಭಾಗ ಗ್ರಾಮೀಣ ಪ್ರದೇಶಗಳಿಗೆ ಸೇವೆ ಕೊಡುತ್ತಾ ಜನರ ಸೇವೆ ಮಾಡುತ್ತಿದ್ದೇವೆ. ಆದರೂ ನಮ್ಮನ್ನು ಯಾವುದಕ್ಕೂ ಪರಿಗಣನೆಗೆ ತೆಗೆದುಕೊಳ್ಳದೇ ಸಾಮಾನ್ಯ ಕೆಲಸಗಾರರಾಗಿ ಕಾಣುತ್ತಾ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು

ಸಿ.ಬಿ.ಎಸ್.ನಲ್ಲಿ ಇಒಡಿ ಪ್ರಮಾಣಿಕರಣವನ್ನು ತಕ್ಷಣದಿಂದ ನಿಲ್ಲಿಸಬೇಕು. ೧೨ನೇ ದ್ವಿಪಕ್ಷೀಯ ಒಪ್ಪಂದ ಮತ್ತು ೯ನೇ ಜಂಟಿ ಮಸೂz ಪ್ರಕಾರ ೨೦೨೪ ಜು.೮ ರಂದು ಹೊರಡಿಸಿದ ಆದೇಶವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಒಪ್ಪಂದಗಳ ಪ್ರಕಾರ ಎಲ್ಲಾ ಅರ್ಹ ನೌಕರರಿಗೆ ಹೆಚ್ಚುವರಿ ಸಮಯ ಭತ್ಯೆ ಪಾವತಿಸಬೇಕು. ೨೦೧೯ ರಂದು ಹೊರಡಿಸಿದ  ಸಿಜಿಐಟಿ ಅವಾರ್ಡ್‌ನ್ನು ಪ್ರಶ್ನಿಸಿ ನೀಡಿದ ಮೇಲ್ಮನವಿಯನ್ನು ತಕ್ಷಣ ಹಿಂಪಡೆಯಬೇಕು. ಕ್ಯಾಶುಯಲ್ ನೌಕರರ ಕಾಯಂ ಮಾಡುವ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. 

ಮಾರ್ಚ್ ೨೦೨೪ರಲ್ಲಿ ಕಡಿತ ಮಾಡಿದ ಸಂರಕ್ಷಿತ ನೌಕರರು ಮತ್ತು ಆಫೀಸ್ ಬೇರರ್ರ‍್ಸ್ ವೇತನ ಮರು ಪಾವತಿಸಿ, ಕ್ಯಾಶುಯಲ್ ಮತ್ತು ಹೊರಗುತ್ತಿಗೆ ನೌಕರರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ತಕ್ಷಣ ನೀಡಬೇಕು ಹಾಗೂ ಸಂರಕ್ಷಿತ ನೌಕರರನ್ನು ಮುಖ್ಯ ಕಚೇರಿಗೆ ಅಥವಾ ಸಂಘದ ಆಯ್ಕೆಯ ಸ್ಥಳಕ್ಕೆ ನೇಮಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಯೋಗೀಶ್, ತೇಜಸ್ವಿ, ಸೆಂಟ್ರಲ್ ಕಮಿಟಿ ಜಂಟಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮೊದಲಾದವರಿದ್ದರು.

Post a Comment

Previous Post Next Post